ಕೌಟ್ಸ್ಕಿ, ಕಾರ್ಲ್ ಯೋಹಾನ್	

1854-1938. ಸಮಾಜವಾದ ಸಿದ್ಧಾಂತಿ, ಸಮಾಜವಿಜ್ಞಾನಿ, 1854ರ ಅಕ್ಟೋಬರ್ 16ರಂದು ಪ್ರಾಗಿನಲ್ಲಿ ಜನಿಸಿದ. ತಂದೆ eóÉಕ್ಲ ಚಿತ್ರಕಲಾವಿದ. ತಾಯಿ ಆಸ್ಟ್ರಿಯನ್; ನಟಿ, ಕಾದಂಬರಿಕಾರ್ತಿ, ಕೌಟ್ಸ್ಕಿ ಜೀವಮಾನಪರ್ಯಂತ ಎಲ್ಲಕ್ಕಿಂತ ಮಿಗಿಲಾಗಿ ಸಮಾಜವಿಜ್ಞಾನಿಯಾಗಿದ್ದ. ಸಮಾಜವಿಜ್ಞಾನಿ ಅವನಿಗೆ ಸ್ವಭಾವಜನ್ಯವಾಗಿತ್ತಷ್ಟೇ ಅಲ್ಲ, ಅದರಲ್ಲಿ ಆತ ಆಸಕ್ತಿಯನ್ನೂ ಬೆಳೆಸಿಕೊಂಡಿದ್ದ. ಸಮಾಜವಿಜ್ಞಾನವನ್ನು ಅವನು ರಾಜಕೀಯ ಅಧಿಕಾರಕ್ಕಾಗಿ ಬಳಸಿಕೊಳ್ಳಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಆತ ತನ್ನ ಬರೆಹಗಳಿಂದಲೂ ವಿಚಾರಗಳಿಂದಲೂ ತಕ್ಕಮಟ್ಟಿನ ಪ್ರಭಾವ ಗಳಿಸಿದ್ದ. ಕೌಟ್ಸ್ಕಿ ವಿಯನ್ನ ವಿಶ್ವವಿದ್ಯಾಲಯದಲ್ಲಿದ್ದಾಗಲೂ ಪತ್ರಿಕೋದ್ಯಮಿಯಾಗಿದ್ದಾಗಲೂ ಜೆ.ಎಸ್.ಮಿಲ್, ಎಚ್.ಟಿ.ಬಕಲ್ ಮುಂತಾದವರಿಂದ ಪ್ರಭಾವಿತನಾಗಿದ್ದ, ಡಾರ್ವಿನನ ಗ್ರಂಥವಂತೂ ಇವನ ದೃಷ್ಟಿಕೋನವನ್ನೇ ಬದಲಾಯಿಸಿತು. ಪ್ರಕೃತಿವಿಜ್ಞಾನಕ್ಷೇತ್ರದಲ್ಲಿ ಹರಿದಿರುವ ಚಿಂತನಮಾರ್ಗದಲ್ಲೇ ಇತಿಹಾಸದ ವಿಕಾಸವನ್ನು ಕುರಿತ ಸಿದ್ಧಾಂತವೊಂದನ್ನು ರೂಪಿಸಲು ಕೌಟ್ಸ್ಕಿ ಬರಿದೇ ಶ್ರಮಿಸಿದ. ಜûೂರಿಕಿನಿಂದ ಉಚ್ಚಾಟನೆಗೊಂಡು ಬಂದಿದ್ದ ಕೆಲವು ಜರ್ಮನ್ ಸಮಾಜವಾದಿಗಳೊಂದಿಗೆ ಇವನ ಸಂಪರ್ಕ ಬೆಳೆಯಿತು (1881). ಬ್ಯಾಚೊಫೆನ್, ಮಾರ್ಗನ್ ಮುಂತಾದ ಮಾನವಶಾಸ್ತ್ರಜ್ಞರ ಕೃತಿಗಳನ್ನು ಈತ ಅಭ್ಯಾಸ ಮಾಡಿದ. ಎಡ್ವರ್ಡ್ ಬರ್ನ್‍ಸ್ಪೀನನ ಮಾರ್ಗದರ್ಶನ ಕೌಟ್ಸ್ಕಿಗೆ ಲಭ್ಯವಾಗಿ ಈತ ಮಾಕ್ರ್ಸಿಸ್ಟ್ ಆಗಿ ಪರಿವರ್ತನೆ ಹೊಂದಿದ. 1881ರಲ್ಲಿ ಮಾಕ್ರ್ಸ್ ಮತ್ತು ಎಂಗೆಲ್ಸರನ್ನೂ ಕಂಡ. ಮಾಕ್ರ್ಸಿಸಂ ಒಂದು ವಿಚಾರಪಂಥವಾಗಿ ಅಭ್ಯಾಸಯೋಗ್ಯ ವಿಷಯವಾಗುವಂತೆ ತೊಡಗಿಸಿದವನು ಕೌಟ್ಸ್ಕಿ. 1883ರಲ್ಲಿ ಈತ ಆರಂಭಿಸಿದ ಮಾಸಪತ್ರಿಕೆ ಇದಕ್ಕೆ ಸಾಧನವಾಯಿತು. ಈ ಪತ್ರಿಕೆ 1890ರಲ್ಲಿ ವಾರಪತ್ರಿಕೆಯಾಗಿ ಪರಿವರ್ತನೆಗೊಂಡಿತು. 1917ರ ವರೆಗೂ ಕೌಟ್ಸ್ಕಿಯ ಸಂಪಾದಕತ್ವದಲ್ಲಿ ಮುಂದುವರಿದ ಈ ಪತ್ರಿಕೆಯಲ್ಲಿ ವಿಶ್ವದ ಅನೇಕ ಭಾಗಗಳಿದ್ದ ಸಮಾಜವಾದಿ ಚಿಂತಕರ ಮತ್ತು ಇವನವೇ ಆದ ಲೇಖನಗಳು ಪ್ರಕಟವಾದುವು. 1885ರಿಂದ 1890ರ ವರೆಗೆ ಈತ ಲಂಡನಿನಲ್ಲಿ ಎಂಗೆಲ್ಸನ ಸಹಯೋಗದಲ್ಲಿ ಕೆಲಸ ಮಾಡಿದ. ಮಾಕ್ರ್ಸ್‍ವಾದದ ಆರಂಭಕಾಲದ ಪ್ರಚಾರಕ್ಕೆ ಕೌಟ್ಸ್ಕಿ ಬರೆದ (1887) ಒಂದು ಗ್ರಂಥ (ಎಕನಾಮಿಕ್ಸ್ ಡಾಕ್ಟ್ರಿನ್ಸ್ ಆಫ್ ಕಾರ್ಲ್ ಮಾಕ್ರ್ಸ್) ಬಹುಮಟ್ಟಿಗೆ ಕಾರಣ. ಈ ಗ್ರಂಥದ ಜರ್ಮನ್ ಮತ್ತು ವಿದೇಶೀ ಆವೃತ್ತಿಗಳು ಹಲವು ಪ್ರಕಟವಾದುವು. ಇತಿಹಾಸವನ್ನು ಕುರಿತ ಕೆಲವು ಸ್ವೊಪಜ್ಞ ಅಧ್ಯಯನಗಳಿಗೆ ಈತ ಮಾಕ್ರ್ಸಿಯನ್ ವಿಧಾನವನ್ನೇ ಪ್ರಯೋಗ ಮಾಡಿದ. ಆಧುನಿಕ ಸಮಾಜವಾದದ ಪ್ರಾಚೀನ ಆಚಾರ್ಯರ ವಿಚಾರವಾಗಿಯೂ ಫ್ರೆಂಚ್ ಕ್ರಾಂತಿಯ ಕಾಲದಲ್ಲಿಯ ಸಂಕೀರ್ಣ ವರ್ಗಘರ್ಷಣೆಗಳನ್ನು ಕುರಿತೂ ಕೌಟ್ಸ್ಕಿ ಬರೆದ ಗ್ರಂಥಗಳು ಈ ದೃಷ್ಟಿಯವು. ಜರ್ಮನ್ ಸಮಾಜವಾದಿ ಪ್ರಜಾತಾಂತ್ರಿಕ ಪಕ್ಷದ ಕಾರ್ಯಕ್ರಮದ ಸೈದ್ಧಾಂತಿಕ ಭಾಗವನ್ನು ಬರೆದವನು ಕೌಟ್ಸ್ಕಿ. ಇದೇ ಮಾಕ್ರ್ಸಿಸ್ಟ್ ಪಕ್ಷದ ಪ್ರಪ್ರಥಮ ಕಾರ್ಯಕ್ರಮ. ಈ ಕೆಲಸದಿಂದಾಗಿ ಸಮಾಜವಾದಿ ಅಂತರರಾಷ್ಟ್ರೀಯದಲ್ಲಿ ಎಂಗೆಲ್ಸನ ಅನಂತರ ಈತನೇ ದೊಡ್ಡ ಮಾಕ್ರ್ಸಿಸ್ಟ್ ಸಿದ್ಧಾಂತಿಯೆಂಬುದು ಸ್ಥಿರವಾಯಿತು.

	1897ರಲ್ಲಿ ಬರ್ಲಿನಿನಲ್ಲಿ ನೆಲೆಸಿದ ಕೌಟ್ಸ್ಕಿ ಅಲ್ಲಿಯೂ ತನ್ನ ಕಾರ್ಯಕ್ರಮವನ್ನು ಮುಂದುವರಿಸಿದ. ಸಾಮ್ರಾಜ್ಯವಾದದ ಸಿದ್ದಾಂತಗಳನ್ನು ರೂಪಿಸಿದ ಪ್ರಥಮ ಮಾಕ್ರ್ಸಿಸ್ಟ್‍ರಲ್ಲಿ ಕೌಟ್ಸ್ಕಿಯೂ ಒಬ್ಬ. ಆದರೆ ಸಾಮ್ರಾಜ್ಯವಾದಿ ವ್ಯವಸ್ಥೆ ಕೈಗಾರಿಕಾ ಬಂಡವಾಳವಾದದ ಪರಿಣಾಮವೆಂಬುದಕ್ಕಿಂತ, ಅದಕ್ಕೂ ಪೂರ್ವಕಾಲದಲ್ಲಿದ್ದು ಆಧುನಿಕ ಸಮಾಜದಲ್ಲೂ ಪ್ರಬಲವಾಗಿ ಉಳಿದುಕೊಂಡಿರುವ ವರ್ಗಗಳ-ಮುಖ್ಯವಾಗಿ ಶ್ರೀಮಂತ ವರ್ಗದ -ಫಲವೆಂದೇ ಈತ ವಾದಿಸಿದ. 

ಇವನಿಗೆ ಮಾಕ್ರ್ಸ್‍ವಾದದ ಗುರುವಾಗಿದ್ದ ಬರ್ನ್‍ಸ್ಟಿನನೇ ಜರ್ಮನ್ ಸಮಾಜವಾದಿ ಪ್ರಜಾತಂತ್ರಾತ್ಮಕ ಪಕ್ಷದ ಕಾರ್ಯಕ್ರಮವನ್ನು ಟೀಕಿಸಿದ ಕೌಟ್ಸ್ಕಿ ಅದನ್ನು ಸಮರ್ಥಿಸಿದ. ಹೀಗೆ ಈತ ಸಂಪ್ರದಾಯನಿಷ್ಟ ಮಾಕ್ರ್ಸ್‍ವಾದದ ಪ್ರತಿಪಾದಕನಾದ. ಕ್ರಾಂತಿಕಾರಿ ಗುರಿ, ಸಾಧಾರಣವಾದಿ ವಿಧಾನ-ಇವು ಕೌಟ್ಸ್ಕಿಯ ಸೂತ್ರ. ಯೂರೋಪಿನ ವಿವಿಧ ರಾಜ್ಯಗಳಲ್ಲಿ ಪ್ರಬಲವಾಗಿದ್ದ ನಿರಂಕುಶವಾದಿ ಸೈನಿಕ ಪ್ರಭುತ್ವಗಳ ವಿರುದ್ಧ ತೀವ್ರ ಸೆಣಸಾಟದಲ್ಲಿ ನಿರತವಾಗಿದ್ದ ಸಮಾಜವಾದಿ ಪಕ್ಷಗಳನ್ನೆಲ್ಲ ಒಂದುಗೂಡಿಸಲು ಈ ಬಗೆಯ ಕಾರ್ಯಕ್ರಮ ಸಾಧಕವಾಗುವುದೆಂಬುದು ಕೌಟ್ಸ್ಕಿಯ ನಂಬಿಕೆಯಾಗಿತ್ತು. ಪರಿಷ್ಕರಣವಾದಿಗಳಂತೆ ಕೌಟ್ಸ್ಕಿಯೂ ಸಂಸದೀಯ ಪ್ರಜಾತಂತ್ರದಿಂದ ಮಾತ್ರವೇ ಸಮಾಜವಾದದ ಸ್ಥಾಪನೆ ಸಾಧ್ಯವೆಂದು ನಂಬಿದ್ದ. ಆದರೆ ಜರ್ಮನ್ ಸಾಮ್ರಾಜ್ಯದಲ್ಲಿ ಶಾಂತಿಯುತವಾಗಿ ಪ್ರಜಾಪ್ರಭುತ್ವ ವಿಕಾಸಗೊಳ್ಳಲಾರದೆಂದೆ ಇವನು ಬಗೆದಿದ್ದ. ಆದ್ದರಿಂದ ಅಲ್ಲಿ ಪ್ರತಿಭಟನಾ ಮಾರ್ಗದಿಂದ ಅದನ್ನು ಸ್ಥಾಪಿಸಬೇಕೆಂಬುದು ಇವನ ವಾದ.

ಕೌಟ್ಸ್ಕಿ ರಾಜಕೀಯವಾಗಿ ಈ ವಾದ-ಪ್ರತಿವಾದಗಳಲ್ಲಿ ನಿರತನಾಗಿದ್ದಾಗಲೇ ಕಾರ್ಲ್ ಮಾಕ್ರ್ಸ್‍ನ ಕೈಬರಹದ ಟಿಪ್ಪಣಿಗಳನ್ನು ಸಂಪಾದಿಸಿ ಕ್ಯಾಪಿಟಲ್ ಗ್ರಂಥದ ನಾಲ್ಕನೆಯ ಸಂಪುಟವನ್ನು ಪ್ರಕಟಿಸಿದ. ರೋಸ ಲಕ್ಸೆಂಬರ್ಗ್ ನೇತೃತ್ವದಲ್ಲಿ ಕ್ರಾಂತಿಕಾರಿ ಸಾಮೂಹಿಕ ಮುಷ್ಕರಗಳನ್ನು ಸಮರ್ಥಿಸುತ್ತಿದ್ದವರ ಧೋರಣೆ ಅನರ್ಥಕಾರಕವೆಂಬುದು ಕೌಟ್ಸ್ಕಿಯ ಅಭಿಮತವಾಗಿತ್ತು. ಸಮಾಜವಾದಿ ಪ್ರಜಾತಂತ್ರಾತ್ಮಕ ಪಕ್ಷಕ್ಕೂ ಕಮ್ಯೂನಿಸ್ಟರಿಗೂ ಘರ್ಷಣೆಗೆ ಈ ಧೋರಣೆಯೇ ಕಾರಣವಾಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಸಮಾಜವಾದಿ ಪ್ರಜಾತಂತ್ರಾತ್ಮಕ ಪಕ್ಷ ಜರ್ಮನ್ ಸರ್ಕಾರಕ್ಕೆ ಬಹುಮತದ ಬೆಂಬಲ ನೀಡಿದ್ದನ್ನು ಕೌಟ್ಸ್ಕಿ ವಿರೋಧಿಸಿದ. ಆ ಪಕ್ಷ ಒಡೆಯದಂತೆ ಸಾಧ್ಯವಾದಷ್ಟೂ ಪ್ರಯತ್ನಿಸಿದ. ಇವನು ಸ್ವತಂತ್ರ ಸಮಾಜವಾದಿ ಪ್ರಜಾತಂತ್ರಾತ್ಮಕ ಪಕ್ಷವನ್ನು ಸೇರಿದ. ಯುದ್ಧದ ಕೊನೆಯಲ್ಲಿ ಸಂಭವಿಸಿದ ಜರ್ಮನ್ ಕ್ರಾಂತಿಯ ಆನಂತರ ಸ್ಥಾಪಿತವಾದ ಸರ್ಕಾರದಲ್ಲಿ ಇವನು ಸ್ವಲ್ಪಕಾಲ ವಿದೇಶಾಂಗ ಖಾತೆಯ ಕಾರ್ಯದರ್ಶಿಯಾಗಿದ್ದ.

ರಷ್ಯಾದಲ್ಲಿ ಬಾಲ್ಷೆವಿಕ್ ಕ್ರಾಂತಿ ಸಂಭವಿಸಿತು. ಹಿಂದುಳಿದ ಸಮಾಜದಲ್ಲಿ, ಅಲ್ಪಸಂಖ್ಯಾತ ಪಕ್ಷವೊಂದು ಹಿಂಸಾತ್ಮಕ ಮಾರ್ಗದಿಂದ ಸಮಾಜವಾದದ ಸ್ಥಾಪನೆ ಮಾಡುವ ಪ್ರಯತ್ನಕ್ಕೆ ಕೌಟ್ಸ್ಕಿಯ ವಿರೋಧವಿತ್ತು. ಇದು ಮಾಕ್ರ್ಸಿಸಂಗೆ, ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ-ಎಂದು ಈತ ವಾದಿಸಿದ. ಇದು ಸರ್ವಾಧಿಕಾರಕ್ಕೆ ಎಡೆಮಾಡಿಕೊಟ್ಟು ಅಂತಿಮವಾಗಿ ಕುಸಿದುಬೀಳುವುದೆಂಬುದು ಇವನ ಭಾವನೆ. ಕೌಟ್ಸ್ಕಿಯನ್ನು ತತ್ವಭ್ರಷ್ಟನೆಂದು ಲೆನಿನ್, ಟ್ರಾಟ್ಸ್ಕಿ ಕರೆದರು. ಅದಕ್ಕೆ ಇವನು ಟೆರರಿಸಂ ಅಂಡ್ ಕಮ್ಯೂನಿಸಂ ಎಂಬ ಪುಸ್ತಕದಲ್ಲಿ (1919) ಉತ್ತರ ನೀಡಿದ. 

ತನ್ನ 70ನೆಯ ವಯಸ್ಸಿನಲ್ಲಿ ಕೌಟ್ಸ್ಕಿ ವಿಯನ್ನಾಕ್ಕೆ ಹಿಂದಿರುಗಿ ಸಂಶೋಧನೆಯಲ್ಲಿ ನಿರತನಾದ. ಸಮಾಜವಿಜ್ಞಾನ ಮತ್ತು ಪ್ರಕೃತಿವಿಜ್ಞಾನಗಳ ನಡುವಣ ಅಡ್ಡಗೋಡೆಯ ಮೇಲಣ ವಿಷಯಗಳಾದ ಮಾನವಶಾಸ್ತ್ರ, ಜೀವಪರಿಸ್ಥಿತಿಶಾಸ್ತ್ರ, ಜನಾಂಗ ವಿವರಣಶಾಸ್ತ್ರ-ಇವು ಬಲು ಹಿಂದಿನಿಂದಲೂ ಕೌಟ್ಸ್ಕಿಯನ್ನು ಆಕರ್ಷಿಸಿದ್ದುವು. ಆ ಎರಡೂ ಬಗೆಯ ಕ್ಷೇತ್ರಗಳಿಗೆ ಸಮಾನವಾಗಿ ಅನ್ವಯವಾಗುವ ಪರಿಕಲ್ಪನೆಗಳನ್ನು ರೂಪಿಸಲು ಕೌಟ್ಸ್ಕಿ ಯತ್ನಿಸಿದ. 1927ರಲ್ಲಿ ಇತಿಹಾಸದ ದ್ರವ್ಯವಾಸ್ತವತಾವಾದಿ ಪರಿಕಲ್ಪನೆಯನ್ನು ಕುರಿತು ಬರೆದ ಗ್ರಂಥದಲ್ಲಿ ಸಮಾವಿಜ್ಞಾನ ಮತ್ತು ಪ್ರಕೃತಿ ವಿಜ್ಞಾನ ಕುರಿತ ತನ್ನ ಭಾವನೆಗಳನ್ನು ಈತ ಸ್ಪಷ್ಟೀಕರಿಸಿದ್ದಾನೆ. ಈತ ಹೆಗೆಲನ ಮೂಲ ಸಂಕಲ್ಪವಾದಿ ತರ್ಕಮಾರ್ಗವನ್ನು ತಳ್ಳಿಹಾಕಿ ಡಾರ್ವಿನನ ತರ್ಕಮಾರ್ಗದಲ್ಲೇ ಇತಿಹಾಸದ ಬೆಳವಣಿಗೆಯನ್ನು ಗುರುತಿಸಿದ. ಜೈವಿಕ ಪ್ರಕೃತಿಯಲ್ಲಿ ನಿಧಾನವಾಗಿ ವ್ಯತ್ಯಾಸಗೊಳ್ಳುವ ಪರಿಸರಕ್ಕೆ ತಕ್ಕಂತೆ ಜೀವಿಜಾತಿಗಳು ಹೊಂದಿಕೊಳ್ಳುತ್ತವೆ. ಸಮಾಜದಲ್ಲಿ ಮಾನವ ತನ್ನ ಪರಿಸರವನ್ನು ತಾನೆ ಬದಲಾಯಿಸಿ ಹೊಂದಿಸುತ್ತಾನೆ. ಇದರಿಂದ ಮತ್ತೆ ಬದಲಾವಣೆ, ಮತ್ತೆ ಹೊಂದಾವಣೆ. ಹೀಗೆ ಸಂಭವಿಸುವ ತಾಂತ್ರಿಕ ಸಾಮಾಜಿಕ ಬದಲಾವಣೆ-ಹೊಂದಾವಣೆಗಳ ಕೊನೆಯಿಲ್ಲದ ಪ್ರಕ್ರಿಯೆಯೇ ಇತಿಹಾಸವೆನಿಸುತ್ತದೆ ಎಂಬುದು ಇವನ ಸೂತ್ರ. 
ಜರ್ಮನಿ ಆಸ್ಟ್ರಿಯಾಗಳಲ್ಲಿ ಫ್ಯಾಸಿಸಂ ತಲೆಯೆತ್ತಿದಾಗ ಆ ಬಗ್ಗೆ ಇವನು ಸಾಕಷ್ಟು ಬರೆದ. ಇನ್ನೂ ಕೆಲವು ಕೃತಿಗಳು ಇವನ ಲೇಖನಿಯಿಂದ ಹೊರಬಿದ್ದುವು. ದೀರ್ಘವಾದ ಆತ್ಮಚರಿತ್ರೆ ಬರೆಯುವ ಕಾರ್ಯದಲ್ಲೂ ಇವನು ತೊಡಗಿದ್ದ. ಅದರ ಆರಂಭದ ಭಾಗವನ್ನು ಮುಗಿಸುವ ವೇಳೆಗೆ ನಾಟ್ಸಿ ಆಕ್ರಮಣದಿಂದಾಗಿ ಕೌಟ್ಸ್ಕಿ ಅಮ್‍ಸ್ಟರ್‍ಡ್ಯಾಂಗೆ ಓಡಿಹೋದ (ಮಾರ್ಚ್ 1938). ಅಲ್ಲೇ ಅವನಿಗೆ ಅಂತ್ಯ ಪ್ರಾಪ್ತವಾಯಿತು. (1938ರ ಅಕ್ಟೋಬರ್ 17). 			(ಎಸ್.ಎನ್.ಎಲ್.; ವಿ.ಆರ್.ಹೆಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ